ಸನಾ: ಯೆಮನ್ನಲ್ಲಿ ಹೌತಿ ಬಂಡುಕೋರರು ಮತ್ತು ಸರ್ಕಾರಿ ಪಡೆಗಳ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಎರಡೂ ಕಡೆಯಿಂದ ಭಾರೀ ದಾಳಿ ನಡೆಸಿರುವುದಾಗಿ ಹೇಳಿಕೆಗಳು ಹೊರಬಿದ್ದಿವೆ. ಕಳೆದ 24 ಗಂಟೆಗಳಲ್ಲಿ ಹೌತಿ ನೆಲೆಗಳ ಮೇಲೆ 749 ದಾಳಿ ನಡೆಸಲಾಗಿದೆ ಎಂದು ಯೆಮನ್ ಸರ್ಕಾರಿ ಪಡೆಗಳು ಹೇಳಿಕೊಂಡಿವೆ.
ಸರ್ಕಾರಿ ಪಡೆಗಳ ವಕ್ತಾರ ಮಜೀದ್ ಅಲ್-ನುಜೈಲಿ ಅವರ ಪ್ರಕಾರ, ಹೌತಿಗಳ ಕಮಾಂಡ್ ಕೇಂದ್ರಗಳು, ರಕ್ಷಣಾತ್ಮಕ ನೆಲೆಗಳು, ವಾಹನಗಳು ಮತ್ತು ಪೂರೈಕೆ ಮಾರ್ಗಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಈ ಕಾರ್ಯಾಚರಣೆಯಲ್ಲಿ 239 ಹೌತಿ ಹೋರಾಟಗಾರರು ಹತರಾಗಿದ್ದು, 117 ಸೇನಾ ವಾಹನಗಳು ಹಾಗೂ ಯುದ್ಧೋಪಕರಣಗಳಿಗೆ ಹಾನಿಯಾಗಿದೆ ಎಂದು ಪಡೆಗಳು ಪ್ರತಿಪಾದಿಸಿವೆ.

ಇದಕ್ಕೆ ಪ್ರತಿಯಾಗಿ, ಸೌದಿ ಅರೇಬಿಯಾ ಸನಾ ಸೇರಿದಂತೆ ಯೆಮನ್ನ ಎಂಟು ಪ್ರಾಂತ್ಯಗಳಲ್ಲಿ 101 ವಾಯು ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿದೆ ಎಂದು ಹೌತಿಗಳು ಆರೋಪಿಸಿದ್ದಾರೆ. ಈ ದಾಳಿಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವರು ಮೃತಪಟ್ಟಿದ್ದು, ಗಾಯಗೊಂಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ಆರೋಪಗಳಿಗೂ ಸ್ವತಂತ್ರ ದೃಢೀಕರಣ ಲಭ್ಯವಾಗಿಲ್ಲ.
ದಕ್ಷಿಣ ಯೆಮನ್ನ ಅಡೆನ್ ವಿಮಾನ ನಿಲ್ದಾಣದ ಸಮೀಪ ಮತ್ತೊಮ್ಮೆ ಸ್ಫೋಟ ಸಂಭವಿಸಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಮಾನ ನಿಲ್ದಾಣವನ್ನು ಖಾಲಿ ಮಾಡುವಂತೆ ಹೌತಿಗಳು ಅಂತಿಮ ಎಚ್ಚರಿಕೆ ನೀಡಿದ ಬೆನ್ನಲ್ಲೇ, ನೂರಾರು ಪ್ರಯಾಣಿಕರು ಸ್ಥಳದಿಂದ ಹೊರಹೋಗಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ರೋಗಿಗಳು ಸೇರಿದಂತೆ ಹಲವರು ವಿಮಾನ ನಿಲ್ದಾಣ ತೊರೆದಿದ್ದಾರೆ ಎನ್ನಲಾಗಿದೆ.
ಸೌದಿ ಸೇನೆಯ ಸರಕು ಸಾಗಣೆ ವಿಮಾನದಲ್ಲಿ ಶಸ್ತ್ರಾಸ್ತ್ರಗಳನ್ನು ಸಾಗಿಸಲಾಗುತ್ತಿದೆ ಎಂದು ಹೌತಿಗಳು ಆರೋಪಿಸಿದ್ದಾರೆ. ಇನ್ನೊಂದೆಡೆ, ತೈಜ್ ಪ್ರಾಂತ್ಯದಲ್ಲಿ ಮುನ್ನಡೆ ಸಾಧಿಸಿರುವುದಾಗಿ ಯೆಮನ್ ಸರ್ಕಾರಿ ಪಡೆಗಳು ಹೇಳಿಕೊಂಡಿವೆ.
