ಬೆಂಗಳೂರು: ಗ್ರಾಮೀಣ ಮಹಿಳೆಯರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡುವ ಉದ್ದೇಶದಿಂದ ಭರವಸೆ ಚಾರಿಟೇಬಲ್ ಫೌಂಡೇಶನ್ ಹಾಗೂ ಕಾವೇರಿ ಎಜುಕೇಶನ್ ಸೊಸೈಟಿ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ಶಿಬಿರ ಯಶಸ್ವಿಯಾಗಿ ನಡೆಯಿತು.
ಅಕ್ಟೋಬರ್ 17ರಂದು ಕಾವೇರಿ ಎಜುಕೇಶನ್ ಸೊಸೈಟಿ ಆವರಣದಲ್ಲಿ ನಡೆದ ಶಿಬಿರದಲ್ಲಿ 300ಕ್ಕೂ ಅಧಿಕ ಮಹಿಳೆಯರು ಭಾಗವಹಿಸಿ ಆರೋಗ್ಯ ತಪಾಸಣೆ, ವೈದ್ಯಕೀಯ ಸಲಹೆ ಹಾಗೂ ಆರೋಗ್ಯ ಜಾಗೃತಿ ಸೇವೆಗಳ ಪ್ರಯೋಜನ ಪಡೆದರು.

ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಥೈರಾಯ್ಡ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ತಪಾಸಣೆ ನಡೆಸಲಾಯಿತು. ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ವೈದ್ಯಕೀಯ ಸಲಹೆ ಮತ್ತು ಮಾರ್ಗದರ್ಶನ ನೀಡಲಾಯಿತು. ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯುವ ಮಹತ್ವದ ಬಗ್ಗೆಯೂ ಜಾಗೃತಿ ಮೂಡಿಸಲಾಯಿತು.

‘ಗರ್ಭಕಂಠ ಕ್ಯಾನ್ಸರ್’ ಆತಂಕ ದೂರಗೊಳಿಸಲು ವಿಶೇಷ ಶುಶ್ರೂಷಾ ಅಭಿಯಾನ:
ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಚಿಕಿತ್ಸಾ ಪದ್ದತಿಯಿಂದ ಗಮನಸೆಳೆದಿರುವ ಡಾ.ಪದ್ಮಿನಿ ಪ್ರಸಾದ್ ಅವರು ಸ್ತ್ರೀರೋಗ ತಜ್ಞೆಯಾಗಿ ದಕ್ಷಿಣ ಭಾರತದಲ್ಲಿ ಖ್ಯಾತಿಯಾಗಿದ್ದಾರೆ. ಹಲವಾರು ದಶಕಗಳಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಹಲವಾರು ಅರೋಗ್ಯ ಶಿಬಿರಗಳನ್ನು ನಡೆಸುತ್ತಾ ಬಂದಿದ್ದಾರೆ. ವೈದ್ಯಕೀಯ ವೃತ್ತಿಯನ್ನು ಸಾಮಾಜಿಕ ಕೈಂಕರ್ಯ ಎಂಬಂತೆ ಅನುಸರಿಸುತ್ತಾ ಬಂದಿರುವ ಡಾ.ಪದ್ಮಿನಿ ಪ್ರಸಾದ್ ಅವರು, ಶೋಷಿತರ, ಯುವಜನರ ಅರೋಗ್ಯ ದೃಷ್ಟಿಯಿಂದ ಶಿಕ್ಷಣ ಮಾದರಿಯಲ್ಲಿ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ.
ಇದಕ್ಕಾಗಿ ‘ಭರವಸೆ’ ಎಂಬ ಪ್ರತಿಷ್ಠಾನವನ್ನು ಸ್ಥಾಪಿಸಿ, ಆ ಮೂಲಕ ಹದಿಹರೆಯದ ಯುವತಿಯರ ಸಮಸ್ಯೆಗಳಿಗೆ ವೈದ್ಯಕೀಯ ಪರಿಹಾರವನ್ನು ಕಲ್ಪಿಸಿಕೊಡುತ್ತಿದ್ದಾರೆ. ಜೊತೆಗೆ, ಮಹಿಳೆಯರನ್ನು ಕಾಡುತ್ತಿರುವ ಗರ್ಭಕಂಠ ಕ್ಯಾನ್ಸರ್ ಆತಂಕವನ್ನು ದೂರಗೊಳಿಸಲು ವಿಶೇಷ ಶುಶ್ರೂಷಾ ಅಭಿಯಾನವನ್ನು ನಡೆಸುತ್ತಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಕ್ಯಾನ್ಸರ್ ಶೋಧನಾ ಪರೀಕ್ಷೆ ನಡೆಸಿ, ಕಾಯಿಲೆಯ ಸುಳಿವು ಇದ್ದಾರೆ ತಕ್ಷಣ ಚಿಕಿತ್ಸೆ ಕೊಡಿಸುವತ್ತ ಗಮನಕೇಂದ್ರೀಕರಿಸಿದ್ದಾರೆ. ಹಲವಾರು ವರ್ಷಗಳಿಂದ ಈ ಕಾರ್ಯಕ್ರಮ ನಡೆಸುತ್ತಾ ಬಂದಿರುವ ಈ ವೈದ್ಯ ಮಾತೆ, ಲಕ್ಷಾಂತರ ಮಹಿಳೆಯರಿಗೆ HPV ಲಸಿಕೆಯನ್ನು ಉಚಿತವಾಗಿ ನೀಡುತ್ತಾ ಬಂದಿದ್ದಾರೆ. ಪ್ರಸಕ್ತ, ಕೇಂದ್ರ ಸರ್ಕಾರ HPV ಲಸಿಕೆ ಅಭಿಯಾನ ಆರಂಭಿಸುವ ಮುನ್ನವೇ ಡಾ.ಪದ್ಮಿನಿ ಪ್ರಸಾದ್ ಅವರು ರಾಜ್ಯದ ಹಲವೆಡೆ ಶಿಬಿರಗಳನ್ನು ಆಯೋಜಿಸುತ್ತಾ HPV ಲಸಿಕೆಯನ್ನು ಉಚಿತವಾಗಿಯೇ ನೀಡುತ್ತಾ ಬಂದಿದ್ದಾರೆ. ಈ ಮಹಾತ್ಕಾರ್ಯದಿಂದಾಗಿ ಡಾ.ಪದ್ಮಿನಿ ಪ್ರಸಾದ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ.

ಬೆಂಗಳೂರಿನ ಆನೇಕಲ್ ಸಮೀಪದ ಕಾವೇರಿ ಎಜುಕೇಶನ್ ಸೊಸೈಟಿ ಆವರಣದಲ್ಲಿ ನಡೆದ ಅರೋಗ್ಯ ಶಿಭಿರದಲ್ಲೂ ‘ಭರವಸೆ’ ಚಾರಿಟೇಬಲ್ ಫೌಂಡೇಶನ್ನ ಸ್ಥಾಪಕ ಅಧ್ಯಕ್ಷೆ ಡಾ. ಪದ್ಮಿನಿ ಪ್ರಸಾದ್ ಭಾಗವಹಿಸಿ ಸಾರ್ವಜನಿಕರಿಗೆ ಅರೋಗ್ಯ ಸಲಹೆ ನೀಡಿದರು. ಎಲ್ಲ ವರ್ಗದ ಜನರಿಗೆ ಆರೋಗ್ಯ ಸೇವೆ ತಲುಪಿಸುವ ಉದ್ದೇಶದಿಂದ ಫೌಂಡೇಶನ್ ಕೈಗೊಂಡಿರುವ ಗ್ರಾಮೀಣ ಆರೋಗ್ಯ ಸೇವಾ ಕಾರ್ಯಗಳ ಭಾಗವಾಗಿ ಶಿಬಿರ ಆಯೋಜಿಸಲಾಗಿತ್ತು. ಫೌಂಡೇಶನ್ನ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಉಚ್ಚಿಲ್ ಅವರು ಉಪಸ್ಥಿತರಿದ್ದು, ಶಿಬಿರದ ಆಯೋಜನೆ ಮತ್ತು ಸೇವಾ ಕಾರ್ಯಗಳ ಸಮನ್ವಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ, ಐಪಿಎಸ್ ಅಧಿಕಾರಿ ಮಧುರ ವೀಣಾ ಹಾಗೂ ಆನೇಕಲ್ ಫಿಸಿಕಲ್ ಎಜುಕೇಶನ್ ಅಸೋಸಿಯೇಷನ್ನ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಿಬಿರಕ್ಕೆ ಶುಭ ಹಾರೈಸಿದರು.

ಮಹಿಳೆಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಆರೋಗ್ಯ ಸೇವೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಇಂತಹ ಶಿಬಿರಗಳನ್ನು ಮುಂದುವರಿಸುವುದಾಗಿ ಭರವಸೆ ಚಾರಿಟೇಬಲ್ ಫೌಂಡೇಶನ್ ತಿಳಿಸಿದೆ.

