ಅಮರಾವತಿ: ಆಂಧ್ರಪ್ರದೇಶದ ಹಲವು ಜಿಲ್ಲೆಗಳಲ್ಲಿ ಅರ್ನಾಬ್ ಚಂಡಮಾರುತದಿಂದ ಸಂಭವಿಸಿರುವ ಹಾನಿಯನ್ನು ಪರಿಶೀಲಿಸಲು ಕೇಂದ್ರ ತಂಡವೊಂದನ್ನು ಕಳುಹಿಸಿಕೊಡುವಂತೆ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ.
ಅಮಿತ್ ಶಾ ಅವರಿಗೆ ಬರೆದ ಪತ್ರದಲ್ಲಿ, ಚಂಡಮಾರುತದಿಂದ ಬೆಳೆಗಳು, ಮನೆಗಳು, ರಸ್ತೆಗಳು ಮತ್ತು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ ಎಂದು ನಾಯ್ಡು ತಿಳಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಅಪಾಯದ ಪ್ರದೇಶಗಳಲ್ಲಿದ್ದ 28,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಲಾಗಿದೆ. ಈವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿರುವ ವರದಿಗಳಿಲ್ಲ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿಯವರು ಪತ್ರದಲ್ಲಿ ಉಲ್ಲೇಖಿಸಿರುವ ಪ್ರಾಥಮಿಕ ಅಂದಾಜಿನ ಪ್ರಕಾರ, ಸುಮಾರು 180 ಮನೆಗಳಿಗೆ ಹಾನಿಯಾಗಿದೆ. 220ಕ್ಕೂ ಹೆಚ್ಚು ಮರಗಳು ರಸ್ತೆಗಳಿಗೆ ಉರುಳಿ ಬಿದ್ದಿದ್ದು, ಹಲವು ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕರಾವಳಿಯ ಕೆಲವು ಭಾಗಗಳಲ್ಲಿ ರಸ್ತೆಗಳು ಹಾನಿಗೊಳಗಾಗಿದ್ದು, ಅನೇಕ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯೂ ವ್ಯತ್ಯಯಗೊಂಡಿದೆ.

ಕೋನಸೀಮಾ, ಕಾಕಿನಾಡ, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಅನಕಾಪಲ್ಲಿ ಮತ್ತು ಕೃಷ್ಣಾ ಜಿಲ್ಲೆಗಳು ಚಂಡಮಾರುತದಿಂದ ಹೆಚ್ಚು ಬಾಧಿತವಾಗಿವೆ ಎಂದು ನಾಯ್ಡು ತಿಳಿಸಿದ್ದಾರೆ.
ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಮತ್ತು ತುರ್ತು ಸ್ಪಂದನಾ ಕಾರ್ಯಗಳನ್ನು ಸಮನ್ವಯಗೊಳಿಸಲು ರಾಜ್ಯ ಸರ್ಕಾರವು ನಿಯಂತ್ರಣ ಕೊಠಡಿಗಳು ಹಾಗೂ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವನ್ನು ಸಕ್ರಿಯಗೊಳಿಸಿದೆ. ಪರಿಹಾರ ಕಾರ್ಯಗಳ ನಿರ್ವಹಣೆಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಚಂಡಮಾರುತದಿಂದ ಉಂಟಾಗಿರುವ ಹಾನಿಯ ಪ್ರಮಾಣವನ್ನು ನಿಖರವಾಗಿ ಪರಿಶೀಲಿಸಲು ಹಾಗೂ ಬಾಧಿತ ಪ್ರದೇಶಗಳ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಲು ಕೇಂದ್ರ ತಂಡವನ್ನು ಆದಷ್ಟು ಬೇಗ ರಾಜ್ಯಕ್ಕೆ ಕಳುಹಿಸುವಂತೆ ನಾಯ್ಡು ಅವರು ಅಮಿತ್ ಶಾ ಅವರನ್ನು ಕೋರಿದ್ದಾರೆ.
