ಹಾವೇರಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ರಾಣೇಬೆನ್ನೂರು ತಾಲೂಕಿನ ಚಳಗೇರಿ ಟೋಲ್ ಬಳಿ ನಡೆದಿದೆ.
ಮೃತರನ್ನು ದಾವಣಗೆರೆಯ ನಿಟವಳ್ಳಿ ಮೌನೇಶ್ವರ ಬಡಾವಣೆ ನಿವಾಸಿಗಳಾದ ಸಿದ್ದಾರ್ಥ (27), ಹಸನ್ಮುಖಿ (29) ಹಾಗೂ ಯಶೋಧಾ ಬಾಯಿ (51) ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಸೌಂದರ್ಯ (26), ಸಿಂಧು (24) ಹಾಗೂ ಒಂದು ವರ್ಷದ ಮಗು ಕಶ್ವಶ್ರೀ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದಾವಣಗೆರೆಯ ಎಸ್.ಎಸ್. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ರಾಣೇಬೆನ್ನೂರಿನಿಂದ ದಾವಣಗೆರೆ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಚಳಗೇರಿ ಟೋಲ್ ಬಳಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಮಾಹಿತಿ ತಿಳಿದು ರಾಣೇಬೆನ್ನೂರು ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.
